ಪ್ರಚಲಿತ ಘಟನೆಗಳು 20 ಜುಲೈ 2021 
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ

ರಾಜ್ಯ
1. ನದಿ ಜೋಡಣೆ ವಿರೋಧಿಸಿ ರಾಜ್ಯದ ಮೇಲ್ಮನವಿ
2. ಮದ್ಯಪಾನ ಸಂಯಮ ಮಂಡಳಿ ಶೃತಿ ಅಧ್ಯಕ್ಷೆ
3. ಎರಡನೇ ಅವಧಿಗೆ ನಿರ್ದೇಶಕರಾಗಿ ಪ್ರೊ. ಶಿವಪ್ರಸಾದ
4. ನಾಗರಿಕ ಸೇವಾ ಮಂಡಳಿ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು
ರಾಷ್ಟ್ರೀಯ
5. ಕಾರವಾರ ನೌಕಾನೆಲೆ ವಕ್ರಕೋಶ ಮೇಲೆ ಡ್ರೋನ್ ಹಾರಾಟ ನಿಷೇಧ
6. ಮುಂಬಯಿಯಲ್ಲಿ ದೇಶದ ಅತೀ ದೊಡ್ಡ ಚಾರ್ಜಿಂಗ್ ಪಾರ್ಕ್
7. ‘ಸ್ಟಡಿ ಇನ್ ಇಂಡಿಯಾ’ದಲ್ಲಿ ಯೋಗ ಸೇರ್ಪಡೆ
ಆರ್ಥಿಕ
8. ಎಚ್ಸಿಎಲ್ ಎಂಡಿ ಸ್ಥಾನದಿಂದ ಕೆಳಗಿಳಿದ ಶಿವ ನಡಾರ್
9. ‘ಅದಾನಿ ಸಮೂಹದ ಕಂಪನಿಗಳ ವಿರುದ್ಧ ತನಿಖೆ
ಅಂತರ-ರಾಷ್ಟ್ರೀಯ
10. ರಷ್ಯಾ: ಹೈಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ
11. 2008 ರ ಮುಂಬೈ ದಾಳಿ ಪ್ರಕರಣದ ಆರೋಪಿ ರಾಣಾ ಹಸ್ತಾಂತರಕ್ಕೆ ಸಮ್ಮತಿ
12. ಪೆರು ಅಧ್ಯಕ್ಷ ಚುನಾವಣೆ: ಗ್ರಾಮೀಣ ಶಾಲೆಯ ಶಿಕ್ಷಕ ಪೆಡ್ರೊ ಕಾಸ್ಟಿಯೊ ಜಯಭೇರಿ
ಕ್ರೀಡೆ
13. ಲೂಯಿಸ್ ಹ್ಯಾಮಿಲ್ಟನ್ಗೆ ಜನಾಂಗೀಯ ನಿಂದನೆ: ಖಂಡನೆ
14. ವಾಲಿಬಾಲ್ ಪಟು, ಜಿಮ್ನಾಸ್ಟ್ಗೆ ಕೋವಿಡ್
ವಿಜ್ಞಾನ
15. ಆರ್ಕ್ಟಿಕ್ ಪ್ರದೇಶಗಳಲ್ಲಿ ಹಿಂದೆಂದೂ ಕಾಣದ ಸಿಡಿಲು-ಮಿಂಚಿನ ಆರ್ಭಟ
16. ಬೀಟಾ ಟೈಟಾನಿಯಂ ಮಿಶ್ರಲೋಹವನ್ನು ಅಭಿವೃದ್ಧಿಪಡಿಸಿದ ಡಿಆರ್ಡಿಒ
17. ವಿಶ್ವದ ಮೊದಲ ಕೃತಕ ಹೃದಯ ಕಸಿ
ಆಡಳಿತ ಸೇವೆ ಪರೀಕ್ಷೆ, ಸಂದರ್ಶನಗಳಲ್ಲಿ ವಿಮರ್ಶಾತ್ಮಕ ಯೋಚನೆಗಾಗಿ
18. ಸಹಕಾರ ಸಂಘಗಳ ನಿರ್ವಹಣೆ: ಸಂವಿಧಾನದ 97ನೇ ತಿದ್ದುಪಡಿ ಭಾಗಶಃ ರದ್ದು
19. ದೇಶದ್ರೋಹ: 326 ಪ್ರಕರಣ ದಾಖಲು-6 ಮಂದಿ ಮಾತ್ರ ತಪ್ಪಿತಸ್ಥರು
20. ಪೆಗಾಸಸ್ ಗೂಢಚರ್ಯೆ ತತ್ರಾಂಶ ಹಗರಣದ ಬಗ್ಗೆ ಗೃಹ ಮಂತ್ರಿ ಪ್ರತಿಕ್ರಿಯೆ
21. ಪೆಗಾಸಸ್: ಮಾಧ್ಯಮಗಳ ಮೇಲೆ ಬೇಹುಗಾರಿಕೆ ಬಗ್ಗೆ ಫ್ರೆಂಚ್ ತನಿಖೆ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್
22. ಕೇಂದ್ರದಿಂದ ರಾಜ್ಯಗಳಿಗೆ ಬಾಕಿ ಜಿಎಸ್ಟಿ ಪರಿಹಾರ ಮೊತ್ತ: 81000 ಕೋಟಿ ರೂ
23. ಚಂದ್ರನ ದಿನ
ರಾಜ್ಯ
1.ನದಿ ಜೋಡಣೆ ವಿರೋಧಿಸಿ ರಾಜ್ಯದ ಮೇಲ್ಮನವಿ
ಕಾವೇರಿಯಲ್ಲಿ ಹೆಚ್ಚುವರಿಯಾಗಿ ಲಭ್ಯವಿರುವ 45 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಆರಂಭಿಸಿರುವ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ.
ಕಾವೇರಿ ಕಣಿವೆಯಲ್ಲಿ ಹೆಚ್ಚುವರಿಯಾಗಿ ಲಭ್ಯವಿರುವ 91 ಟಿಎಂಸಿ ಅಡಿ ನೀರಿನ ಬಳಕೆಗೆ ಸಂವಿಧಾನದ 131ನೇ ವಿಧಿಯ ಅನ್ವಯ ಅವಕಾಶ ನೀಡುವಂತೆಯೂ ಕರ್ನಾಟಕ ಸರ್ಕಾರ ಕೋರಿದೆ.
ಕಾವೇರಿ ನದಿಯನ್ನು ವೈಗೈ, ವೆಲ್ಲಾರು ಮತ್ತು ಗುಂಡಾರು ನದಿಗಳೊಂದಿಗೆ ಜೋಡಿಸಲು ಅನುಮತಿ ಕೋರಿ ಕಳೆದ ಫೆಬ್ರುವರಿಯಲ್ಲಿ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದ್ದು, ಅನುಮತಿ ನೀಡದಂತೆ ಸೂಚಿಸಬೇಕು ಎಂದು ರಾಜ್ಯ ಸರ್ಕಾರ ಆಗ್ರಹಿಸಿದೆ.
2.ಮದ್ಯಪಾನ ಸಂಯಮ ಮಂಡಳಿ ಶೃತಿ ಅಧ್ಯಕ್ಷೆ


ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ನಟಿ ಶೃತಿ ಅವರನ್ನು ನೇಮಕ ಮಾಡಲಾಗಿದೆ. ಶೃತಿ ಈ ಹಿಂದೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿದ್ದರು.
3.ಎರಡನೇ ಅವಧಿಗೆ ನಿರ್ದೇಶಕರಾಗಿ ಪ್ರೊ. ಶಿವಪ್ರಸಾದ
ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ. ಎಸ್.ಎಂ.ಶಿವಪ್ರಸಾದ ಅವರನ್ನು ಎರಡನೇ ಅವಧಿಗೆ ಮುಂದುವರಿಸಿ ಸರ್ಕಾರ ಆದೇಶ ಹೊರಡಿಸಿದೆ. ನಾಲ್ಕು ವರ್ಷದ ಅಧಿಕಾರಾವಧಿ ಇದೇ 30ಕ್ಕೆ ಕೊನೆಗೊಳ್ಳುತ್ತಿತ್ತು.
4.ನಾಗರಿಕ ಸೇವಾ ಮಂಡಳಿ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು
ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಶಿಫಾರಸ್ಸು ಮಾಡುವ ನಾಗರಿಕ ಸೇವಾ ಮಂಡಳಿಯ ಸ್ಥಾಪನೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಕಾರ್ಯಕಾರಿ ಆದೇಶದೊಂದಿಗೆ ಅನಿರ್ದಿಷ್ಠ ಅವಧಿಗೆ ಗಾಳಿಯಲ್ಲಿ ತೂರುವಂತೆ ರಾಜ್ಯ ಸರ್ಕಾರ ಮಾಡಿರುವುದು ಕಾನೂನಿಗೆ ವಿರುದ್ಧವಾಗಿದೆ. ರಾಜ್ಯ ಸರ್ಕಾರ ಕೂಡಲೇ ಮಂಡಳಿ ರಚಿಸಲು ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಎರಡು ತಿಂಗಳಿಗೆ ಮೀರದಂತೆ ನಾಗರಿಕ ಸೇವಾ ಮಂಡಳಿಯನ್ನು ತ್ವರಿತಗತಿಯಲ್ಲಿ ಸ್ಥಾಪಿಸಬೇಕೆಂದು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ಎಸ್. ಸಂಜಯ್ ಗೌಡ ಅವರಿದ್ದ ನ್ಯಾಯಪೀಠ ಹೇಳಿತು.
ಭಾರತೀಯ ಆಡಳಿತಾತ್ಮಕ ಸೇವೆ (ಕೇಡರ್) ನಿಯಮ 1954ದಲ್ಲಿ ಕನಿಷ್ಠ 2 ವರ್ಷಗಳ ಅವಧಿಗೆ ಡಿಸಿಯಾಗಿ ಕಾರ್ಯನಿರ್ವಹಿಸಬೇಕು ಎನ್ನಲಾಗಿದೆ. ಈ ಅವಧಿಗೂ ಮುನ್ನ ಯಾವುದೇ ವರ್ಗಾವಣೆ ಮಾಡಬೇಕಾದರೆ ನಾಗರಿಕ ಸೇವಾ ಮಂಡಳಿಯಿಂದ ಶಿಫಾರಸ್ಸು ಆಗಿರಬೇಕು.
ರಾಷ್ಟ್ರೀಯ
5.ಕಾರವಾರ ನೌಕಾನೆಲೆ ವಕ್ರಕೋಶ ಮೇಲೆ ಡ್ರೋನ್ ಹಾರಾಟ ನಿಷೇಧ


ಕಾರವಾರ ನೌಕಾನೆಲೆ ಹಾಗೂ ಶಸ್ತ್ರಾಗಾರ ವಲಯ ವಜ್ರ ಕೋಶ ಮೇಲೆ ಡ್ರೋನ್ ಹಾರಾಟ ನಿಷೇಧಿಸಿ ದೇಶದ ರಕ್ಷಣಾ ಸಚಿವಾಲಯ ಸೂಚನೆಯ ಮೇರೆಗೆ ನೋ ಪ್ಲೈಯಿಂಗ್ ಝೋನ್ ಎಂದು ಡೈರೆಕ್ಟರ್ ಜನರಲ್ ಸಿವಿಲ್ ಏವಿಯೇಶನ್ ಆದೇಶ ಹೊರಡಿಸಿದೆ.
ಕಾರವಾರ ನೌಕಾ ನೆಲೆಯ ೩ ಕಿ.ಮೀ .ವ್ಯಾಪ್ತಿಯಲ್ಲಿ ಹಾಗೂ ವಜ್ರಕೋಶದ ಪ್ರದೇಶದ ಮೇಲೆ ಡ್ರೋನ್ ಹಾರಾಟ ಹಾಗೂ ಮಾನವ ರಹಿತ ವಿಮಾನ ಹಾರಿಸುವುದರ ಮೇಲೆ ನಿರ್ಬಂಧ ಹೇರಲಾಗಿದೆ. ಹಾಗೇನದರೂ ಖಾಸಗಿಯವರು ಅಥವಾ ಯಾರೇ ಆಗಲಿ ಡ್ರೋನ್ ಹಾರಾಟ ಮಾಡಿದರೆ ಶಿಕ್ಷಾರ್ಹ ಅಪರಾಧವಾಗಿದೆ. ಹಾಗೂ ಕಾನೂನು ಬಾಹಿರ ಹಾರಾಟವನ್ನು ನೇವಿ ಹೊಡೆದುರುಳಿಸಬಹುದಾಗಿದೆ.
6.ಮುಂಬಯಿಯಲ್ಲಿ ದೇಶದ ಅತೀ ದೊಡ್ಡ ಚಾರ್ಜಿಂಗ್ ಪಾರ್ಕ್
ಕೆಲವೇ ವರ್ಷಗಳಲ್ಲಿ ಭಾರತದಲ್ಲಿ ವಿದ್ಯುತ್ ವಾಹನಗಳ ಹೊಸ ಶಕೆ ಆರಂಭಗೊಳ್ಳಲಿದೆ. ಇದನ್ನು ಮನಗಂಡು, ಮುಂಬಯಿ ಮೂಲದ ಮಂಗೇತಾ ಕಂಪೆನಿ, ನವೀ ಮುಂಬಯಿಯಲ್ಲಿ ದೇಶದಲ್ಲೇ ಅತೀ ದೊಡ್ಡದಾದ, ಎಲೆಕ್ಟ್ರಿಕ್ ವಾಹನಗಳ ವಿದ್ಯುತ್ ಚಾರ್ಜಿಂಗ್ ಪಾರ್ಕ್ ತೆರೆದಿದೆ.
21 ಚಾರ್ಜಿಂಗ್ ಪಾಯಿಂಟ್ಗಳು ಇಲ್ಲಿದ್ದು, ಇದರಲ್ಲಿ 4 ಡಿ.ಸಿ. ಚಾರ್ಜರ್ ಗಳಾಗಿದ್ದು ಪ್ರತಿಯೊಂದು 5 ಕಿಲೋ ವ್ಯಾಟ್ನಿಂದ 50 ಕಿ.ವ್ಯಾ. ಸಾಮರ್ಥ್ಯವುಳ್ಳವು. ಪೂರ್ತಿ ಡಿಚಾರ್ಜ್ ಆಗಿರುವ ಬ್ಯಾಟರಿಯನ್ನು ಶೂನ್ಯದಿಂದ ಶೇ.100 ರಷ್ಟು ಚಾರ್ಜ್ ಮಾಡಲು ಕೇವಲ 45 ನಿಮಿಷಗಳು ಸಾಕು.
ಉಳಿದವು ಎ.ಸಿ. (ಅಲ್ಟರ್ನೆಟ್ ಕರೆಂಟ್) ಚಾರ್ಜರ್ ಗಳಾಗಿದ್ದು ಪ್ರತೀ ಚಾರ್ಜರ್ 3.5 ಕಿ.ವ್ಯಾಟ್ನಿಂದ 7.5 ಕಿ.ವ್ಯಾಟ್ ವರೆಗಿನವು. ಒಂದು ಕಾರಿನ ಬ್ಯಾಟರಿ ಚಾರ್ಜ್ ಮಾಡಲು ಒಂದು ರಾತ್ರಿ ಪೂರ್ತಿ ಬೇಕಾಗುತ್ತದೆ.
ಆ್ಯಪ್ ಸೌಲಭ್ಯ
ಗ್ರಾಹಕರಿಗಾಗಿ “ಚಾರ್ಜ್ ಗ್ರಿಡ್’ ಎಂಬ ಆ್ಯಪ್ ಬಿಡುಗಡೆ ಮಾಡಲಾಗಿದೆ. ಚಾರ್ಜಿಂಗ್ ಸೌಲಭ್ಯ ಪಡೆಯುವ ಗ್ರಾಹಕರು, ಅದನ್ನು ಡೌನ್ಲೋಡ್ ಮಾಡಿಕೊಂಡು, ತಮ್ಮ ವಾಹನಗಳ ಚಾರ್ಜಿಂಗ್ ಬಗ್ಗೆ ಮಾಹಿತಿ ಪಡೆಯಬಹುದು.
ಬದಲಿ ಸೌಕರ್ಯ
ಸರಕಾರದಿಂದ ವಿತರಿಸಲಾಗುವ ವಿದ್ಯುತ್ನಿಂದಲೇ ಈ ಚಾರ್ಜಿಂಗ್ ಲಾಟ್ ಕಾರ್ಯನಿರ್ವಹಿಸುತ್ತದೆ. ಪವರ್ ಬ್ಯಾಕ್ಅಪ್ಗಾಗಿ 40 ಕಿಲೋ ವ್ಯಾಟ್ ವಿದ್ಯುತ್ ಔಟ್ಪುಟ್ ನೀಡುವ ಡೀಸೆಲ್ ಜನರೇಟರ್ ಅಳವಡಿಸಲಾಗಿದೆ.
7. ‘ಸ್ಟಡಿ ಇನ್ ಇಂಡಿಯಾ’ದಲ್ಲಿ ಯೋಗ ಸೇರ್ಪಡೆ
ವಿದೇಶದಿಂದ ಭಾರತಕ್ಕೆ ಬಂದು ಅಧಿಕೃತವಾಗಿ ಯೋಗ ಕಲಿಯಲು ಬಯಸುವವರಿಗಾಗಿ ಸರ್ಕಾರದ ‘ಸ್ಟಡಿ ಇನ್ ಇಂಡಿಯಾ’ ಕಾರ್ಯಕ್ರಮದಲ್ಲಿ ಇನ್ನು ಮುಂದೆ ಯೋಗ ತರಬೇತಿಯನ್ನು ಸೇರ್ಪಡೆಗೊಳಿಸಲಾಗುವುದು.
ಸ್ಟಡಿ ಇನ್ ಇಂಡಿಯಾ’ ಎನ್ನುವುದು ಭಾರತ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯನ್ನು ಶಿಕ್ಷಣ ಸಚಿವಾಲಯ, ವಿದೇಶಾಂಗ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಭಾರತದ ವೈದ್ಯಕೀಯ ಮಂಡಳಿಯ ಸಹಯೋಗದೊಂದಿಗೆ 2018ರ ಏಪ್ರಿಲ್ನಲ್ಲಿ ಪ್ರಾರಂಭಿಸಲಾಗಿದೆ.
(ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್)
ಆರ್ಥಿಕ
8.ಎಚ್ಸಿಎಲ್ ಎಂಡಿ ಸ್ಥಾನದಿಂದ ಕೆಳಗಿಳಿದ ಶಿವ ನಡಾರ್


ಭಾರತದ ಐಟಿ ಕ್ಷೇತ್ರದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾದ ಶಿವ ನಡಾರ್ ತನ್ನ ಮಗಳು ರೋಶ್ನಿ ನಡಾರ್ ಮಲ್ಹೋತ್ರಾಗೆ ಎಚ್ಸಿಎಲ್ ಟೆಕ್ ಆಡಳಿತವನ್ನು ಹಸ್ತಾಂತರಿಸಿದ ಒಂದು ವರ್ಷದ ನಂತರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಮಂಡಳಿಯ ಸದಸ್ಯ ಸ್ಥಾನದಿಂದ ಕೆಳಗಿಳಿದಿದ್ದಾರೆ.
76 ನೇ ವಯಸ್ಸನ್ನು ಪೂರೈಸಿದ ಶಿವ ನಡಾರ್ ಈಗ ಕಂಪನಿಯ ಮಂಡಳಿಯ ಅಧ್ಯಕ್ಷ ಎಮೆರಿಟಸ್ ಮತ್ತು ಕಾರ್ಯತಂತ್ರದ ಸಲಹೆಗಾರರ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ.
9.‘ಅದಾನಿ ಸಮೂಹದ ಕಂಪನಿಗಳ ವಿರುದ್ಧ ತನಿಖೆ
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್ಐ) ಅದಾನಿ ಸಮೂಹಕ್ಕೆ ಸೇರಿದ ಕೆಲವು ಕಂಪನಿಗಳ ವಿರುದ್ಧ, ನಿಯಮಗಳನ್ನು ಪಾಲಿಸದ ಆರೋಪದ ಅಡಿ ತನಿಖೆ ನಡೆಸುತ್ತಿವೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ತಿಳಿಸಿದೆ.
ಅಂತರ-ರಾಷ್ಟ್ರೀಯ
10.ರಷ್ಯಾ: ಹೈಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ


3M22 Zircon (Tsirkon) SS-N-33
ರಷ್ಯಾ ಸೇನೆ ಸೋಮವಾರ ನಡೆಸಿದ ಹೊಸ ಜಿರ್ಕಾನ್ ಹೈಪರ್ ಸಾನಿಕ್ ಕ್ರೂಸ್ ಕ್ಷಿಪಣಿಯ ಮತ್ತೊಂದು ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.


ಕ್ಷಿಪಣಿ ಉಡಾವಣೆ ಮಾಡಿದ ಅಡ್ಮಿರಲ್ ಗೋರ್ಷ್ಕೋವ್
ರಷ್ಯಾದ ಉತ್ತರದ ಶ್ವೇತ ಸಾಗರದಲ್ಲಿ ನೆಲೆಗೊಂಡಿರುವ ಅಡ್ಮಿರಲ್ ಗ್ರೋಷ್ಕೋವ್ ಯುದ್ಧ ನೌಕೆಯಿಂದ ಈ ಕ್ಷಿಪಣಿಯನ್ನು ಉಡಾಯಿಸಲಾಗಿದೆ. 350 ಕಿ.ಮೀ. ದೂರದಲ್ಲಿ ನಿಗದಿಪಡಿಸಿದ್ದ ಗುರಿಯನ್ನು ಈ ಕ್ಷಿಪಣಿ ಯಶಸ್ವಿಯಾಗಿ ಭೇದಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
10 ಮೀಟರ್ ಉದ್ದ ಇರುವ ಜಿರ್ಕಾನ್ ಕ್ಷಿಪಣಿ ಶಬ್ದದ ಒಂಬತ್ತು ಪಟ್ಟು ವೇಗದಲ್ಲಿ, 40ಕಿಮಿ ಎತ್ತರದಲ್ಲಿ ಹಾರಬಲ್ಲದು ಮತ್ತು 1,000 ಕಿಲೋಮೀಟರ್ (620 ಮೈಲಿ) ದೂರವನ್ನು ಇದು ಕ್ರಮಿಸಬಲ್ಲದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಇದು ತನ್ನ ವೇಗದಿಂದಾಗಿ ಯಾವುದೇ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ಧಾಳಿ ಮಾಡಬಲ್ಲದು.
11.2008 ರ ಮುಂಬೈ ದಾಳಿ ಪ್ರಕರಣದ ಆರೋಪಿ ರಾಣಾ ಹಸ್ತಾಂತರಕ್ಕೆ ಸಮ್ಮತಿ
2008 ರ ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣದ ಪ್ರಮುಖ ಆರೋಪಿ ತನಾವ್ಟುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ.
ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತನಾವ್ಟುರ್ ರಾಣಾ ಹಸ್ತಾಂತರ ಕುರಿತ ಅರ್ಜಿ ವಿಚಾರಣೆ ನಡೆಸುತ್ತಿರುವ ಲಾಸ್ ಏಂಜಲೀಸ್ ನ ಕೋರ್ಟ್ ಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಆಡಳಿತ ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಗೆ ನೀಡಿದೆ ಎಂದು ಹೇಳಿದೆ.
12.ಪೆರು ಅಧ್ಯಕ್ಷ ಚುನಾವಣೆ: ಗ್ರಾಮೀಣ ಶಾಲೆಯ ಶಿಕ್ಷಕ ಪೆಡ್ರೊ ಕಾಸ್ಟಿಯೊ ಜಯಭೇರಿ


ದಕ್ಷಿಣ ಅಮೆರಿಕದ ಪೆರು ರಾಷ್ಟ್ರದ ಅಧ್ಯಕ್ಷರಾಗಿ ಗ್ರಾಮೀಣ ಶಾಲೆಯ ಶಿಕ್ಷಕ ಪೆಡ್ರೊ ಕಾಸ್ಟಿಯೊ ಆಯ್ಕೆಯಾಗಿದ್ದಾರೆ. 40 ವರ್ಷಗಳಲ್ಲೇ ಸುದೀರ್ಘವಾದ ಮತ ಎಣಿಕೆ ಪ್ರಕ್ರಿಯೆ ನಡೆದು ಅಧಿಕೃತ ಫಲಿತಾಂಶ ಪ್ರಕಟವಾಗಿದೆ.
ಎಡಪಂಥೀಯ ನಾಯಕ ಪೆಡ್ರೊ ಕಾಸ್ಟಿಯೊ (51) ಅವರಿಗೆ ಬಡವರು ಮತ್ತು ಗ್ರಾಮೀಣ ಭಾಗದ ಜನರ ಬೆಂಬಲ ದೊರೆತಿದ್ದು, ಬಲಪಂಥೀಯ ರಾಜಕಾರಣಿ ಫ್ಯೂಜಿಮೊರಿ ಅವರನ್ನು 44,000 ಮತಗಳ ಅಂತರದಿಂದ ಮಣಿಸಿದ್ದಾರೆ. ಒಂದು ತಿಂಗಳಿಗೂ ಹೆಚ್ಚು ಸಮಯ ನಡೆದ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ನಡೆದಿದೆ.
ಪೆಡ್ರೊ ರಾಷ್ಟ್ರದಾದ್ಯಂತ 'ಸಿರಿವಂತ ರಾಷ್ಟ್ರದಲ್ಲಿ ಇನ್ನು ಮುಂದೆ ಬಡವರಿಲ್ಲ' ಎಂಬ ಘೋಷವಾಕ್ಯ ಪ್ರಚುರ ಪಡಿಸಿದ್ದಾರೆ.
ಜಗತ್ತಿನ ಎರಡನೇ ಅತಿ ದೊಡ್ಡ ತಾಮ್ರ ಉತ್ಪಾದಕ ರಾಷ್ಟ್ರವಾಗಿರುವ ಪೆರು, ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹತ್ತಾರು ವರ್ಷಗಳ ದುಡಿಮೆಯು ಕೋವಿಡ್ ಪರಿಸ್ಥಿತಿಯಲ್ಲಿ ಕರಗಿ ಹೋಗಿದ್ದು, ಬಡತನದ ಪ್ರಮಾಣ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಾಗಿದೆ.
ಗಣಿಗಾರಿಕೆ ವಲಯದಿಂದ ಸಂಗ್ರಹವಾಗುವ ಆದಾಯವನ್ನು ಬಳಸಿ ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಸಾರ್ವಜನಿಕ ಸೇವೆಗಳನ್ನು ಉನ್ನತೀಕರಿಸುವುದಾಗಿ ಪೆಡ್ರೊ ಕ್ಯಾಸ್ಟಿಯೊ ಭರವಸೆ ನೀಡಿದ್ದಾರೆ.
ಪೆಡ್ರೊ ಅವರು ಕಳೆದ 25 ವರ್ಷಗಳು ಗ್ರಾಮೀಣ ಭಾಗದ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಬ್ಬರ್ ಚಪ್ಪಲಿ ಮತ್ತು ತಲೆಗೆ ಬಿಳಿಯ ಟೊಪ್ಪಿ ತೊಟ್ಟು ಚುನಾವಣೆ ಪ್ರಚಾರ ನಡೆಸಿದರು. ಶಿಕ್ಷಕರಿಗೆ ಉತ್ತಮ ವೇತನಕ್ಕೆ ಆಗ್ರಹಿಸಿ 2017ರಲ್ಲಿ ಅವರು ಶಿಕ್ಷಕರ ಅತಿ ದೊಡ್ಡ ಪ್ರತಿಭಟನೆ ನಡೆಸಿದ್ದರು. ಬೇಡಿಕೆ ಈಡೇರಿಕೆಗಾಗಿ ಸಂಪುಟ ಸಚಿವರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು.
ಕ್ರೀಡೆ
13.ಲೂಯಿಸ್ ಹ್ಯಾಮಿಲ್ಟನ್ಗೆ ಜನಾಂಗೀಯ ನಿಂದನೆ: ಖಂಡನೆ
ಏಳು ಬಾರಿಯ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜನಾಂಗೀಯ ನಿಂದನೆ ವ್ಯಕ್ತವಾಗಿದ್ದನ್ನು, ಫಾರ್ಮುಲಾ ಒನ್ ಮತ್ತು ಎಫ್ಐಎ ಖಂಡಿಸಿವೆ.
ಮರ್ಸಿಡಿಸ್ ಚಾಲಕನಾಗಿರುವ, ಬ್ರಿಟನ್ನ ಹ್ಯಾಮಿಲ್ಟನ್ ಬ್ರಿಟಿಷ್ ಗ್ರ್ಯಾನ್ಪ್ರಿಯಲ್ಲಿ ಚಾಂಪಿಯನ್ ಆಗಿದ್ದರು. ರೇಸ್ ವೇಳೆ ಅವರ ಮತ್ತು ಎದುರಾಳಿ ರೆಡ್ಬುಲ್ ತಂಡದ ಮ್ಯಾಕ್ಸ್ ವರ್ಸ್ಟ್ಯಾಪನ್ ಅವರ ಕಾರುಗಳ ನಡುವೆ ಅಪಘಾತ ಸಂಭವಿಸಿ ವರ್ಸ್ಟ್ಯಾಪನ್ ರೇಸ್ನಿಂದ ಹೊರಗುಳಿದಿದ್ದರು. ಚಾಂಪಿಯನ್ಷಿಪ್ನ ಬಳಿಕ ಹ್ಯಾಮಿಲ್ಟನ್ ಅವರನ್ನು ಜನಾಂಗೀಯ ನಿಂದನೆಗೆ ಗುರಿ ಮಾಡಲಾಗಿತ್ತು.
14.ವಾಲಿಬಾಲ್ ಪಟು, ಜಿಮ್ನಾಸ್ಟ್ಗೆ ಕೋವಿಡ್
ಒಲಿಂಪಿಕ್ಸ್ನ ಕ್ರೀಡಾ ಗ್ರಾಮದಲ್ಲಿ ಸೋಮವಾರವೂ ಕೋವಿಡ್ ಪ್ರಕರಣಗಳು ವರದಿ ಯಾಗಿವೆ. ಅಮೆರಿಕದ ಜಿಮ್ನಾಸ್ಟ್ ಮತ್ತು ಜೆಕ್ ಗಣರಾಜ್ಯದ ಬೀಚ್ ವಾಲಿಬಾಲ್ ಪಟುವಿನಲ್ಲಿ ಸೋಂಕು ಇರುವುದು ದೃಢವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜ್ಞಾನ
15.ಆರ್ಕ್ಟಿಕ್ ಪ್ರದೇಶಗಳಲ್ಲಿ ಹಿಂದೆಂದೂ ಕಾಣದ ಸಿಡಿಲು-ಮಿಂಚಿನ ಆರ್ಭಟ
ಅಲಾಸ್ಕಾದ ಉತ್ತರ ಭಾಗದ ಹಿಮಾಚ್ಛಾದಿತ ಆರ್ಕ್ಟಿಕ್ ಪ್ರದೇಶದಲ್ಲಿ ಅಸಹಜ ರೀತಿಯಲ್ಲಿ ಮಿಂಚು-ಸಿಡಿಲು ಸತತವಾಗಿ ಕಾಣಿಸಿಕೊಳ್ಳುತ್ತಿರುವುದು ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇದು ಜಾಗತಿಕ ತಾಪಮಾನದ ಫಲ ಎಂದು ಹೇಳಿದ್ದಾರೆ.
ಹೊಸ ಹೊಸ ಪ್ರಾಕೃತಿಕ ವಿದ್ಯಮಾನಗಳು ವಿಜ್ಞಾನಿಗಳನ್ನು ಚಿಂತೆಗೀಡುಮಾಡುತ್ತಿವೆ. ಸೈಬೀರಿಯಾದಿಂದ ಅಲಾಸ್ಕಾದ ಉತ್ತರ ಭಾಗದವರೆಗಿನ ಹಿಮಾವ್ರತ ಆರ್ಕ್ಟಿಕ್ ಭಾಗದಲ್ಲಿ ಭಾರಿ ಪ್ರಮಾಣದ ಸತತ ಮೂರು ಸಿಡಿಲುಗಳು ಈ ವಾರ ಅಪ್ಪಳಿಸಿವೆ. ಇಡೀ ಭಾಗದಲ್ಲಿ ಅಸಂಖ್ಯಾತ ಮಿಂಚುಗಳು ಕಾಣಿಸಿಕೊಂಡಿದೆ. ಇದು ನಿಜಕ್ಕೂ ಅತ್ಯಂತ ಅಸಹಜ ವಿದ್ಯಮಾನ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಜತೆಗೆ ಜಾಗತಿಕ ತಾಪಮಾನದ ಪರಿಣಾಮದ ಮತ್ತೊಂದು ಉದಾಹರಣೆ ಎಂದು ವ್ಯಾಖ್ಯಾನಿಸಿದ್ದಾರೆ.
ಸಾಮಾನ್ಯವಾಗಿ, ಆರ್ಕ್ಟಿಕ್ ಸಮುದ್ರದ ನೀರು ಮಂಜುಗಡ್ಡೆಯಿಂದ ಆವರಿಸಿದಾಗ ಮೇಲ್ಭಾಗದಲ್ಲಿ ಗಾಳಿ ತುಂಬಿರುತ್ತದೆ. ಹೀಗಾಗಿ ಇಂತಹ ಜಾಗದಲ್ಲಿ ಮಿಂಚು ಸಿಡಿಲು ಸೃಷ್ಟಿಯಾಗಬೇಕೆಂದರೆ ಭಾರಿ ಪ್ರಮಾಣದ ಉಷ್ಣದ ಅಗತ್ಯವಿರುತ್ತದೆ. ಆದರೆ ಜಗತ್ತಿನ ಇತರೆ ಭಾಗಗಳಿಗಿಂತಲೂ ಆರ್ಕ್ಟಿಕ್ನಲ್ಲಿ ವಾತಾವರಣ ತಾಪಮಾನ ಹೆಚ್ಚು ವೇಗವಾಗಿ ಆಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
2010ರಿಂದಲೂ ಆರ್ಕ್ಟಿಕ್ ವಲಯದಲ್ಲಿ ಮಿಂಚು ಕಾಣಿಸಿಕೊಳ್ಳುವುದು ಮೂರು ಪಟ್ಟು ಹೆಚ್ಚಾಗಿದೆ. ಇದು ಉತ್ತರದ ಭಾಗದಲ್ಲಿ ಸಮುದ್ರ ಮಂಜುಗಡ್ಡೆ ಕರಗುವಿಕೆ ಹೆಚ್ಚಿರುವುದು ಮತ್ತು ತಾಪಮಾನ ವೈಪರೀತ್ಯ ನೇರ ಪರಿಣಾಮ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹಿಮ ಹೆಚ್ಚು ಕರಗಿದಂತೆ ಹೆಚ್ಚು ನೀರು ಆವಿಯಾಗಲು ಸಾಧ್ಯವಾಗುತ್ತದೆ. ಬಿಸಿಯಾಗುತ್ತಿರುವ ವಾತಾವರಣಕ್ಕೆ ತೇವವನ್ನು ಸೇರಿಸುತ್ತದೆ.
ಈ ಸಿಡಿಲುಗಳು ಆರ್ಕ್ಟಿಕ್ನಲ್ಲಿ ಬೋರಿಯಲ್ ಅರಣ್ಯಕ್ಕೆ ಅಪಾಯಕಾರಿಯಾಗಿದೆ. ಕೆಲವು ಪ್ರದೇಶಗಳಲ್ಲಿ ಕಾಳ್ಗಿಚ್ಚು ಹೊತ್ತಲು ಕಾರಣವಾಗುತ್ತಿದೆ. ರಷ್ಯಾದ ಬೋರಿಯಲ್ ಸೈಬೀರಿಯಾ, ಬೇರೆ ಎಲ್ಲ ಆರ್ಕ್ಟಿಕ್ ಪ್ರದೇಶಕ್ಕಿಂತಲೂ ಹೆಚ್ಚಿನ ಮಿಂಚು ಕಂಡಿದೆ. ಆರ್ಕ್ಟಿಕ್ನ ಅರಣ್ಯರಹಿತ ಪ್ರದೇಶಗಳಲ್ಲಿ ಪದೇ ಪದೇ ಮಿಂಚು ಉಂಟಾಗುತ್ತಿದೆ. ಇದೇ ರೀತಿ ಆರ್ಕ್ಟಿಕ್ ಸಮುದ್ರ ಮತ್ತು ಮಂಜುಗಡ್ಡೆಯ ಮೇಲೆಯೂ ಆಗುತ್ತಿದೆ.
2019ರ ಆಗಸ್ಟ್ ತಿಂಗಳಲ್ಲಿ ಉತ್ತರ ಧ್ರುವದಿಂದ 60 ಮೈಲು ಒಳಗೇ ಮಿಂಚುಗಳು ಉದ್ಭವಿಸಿದ್ದವು. ಇದೇ ರೀತಿಯ ವಾತಾವರಣದ ಸ್ಥಿತಿ ಮುಂದುವರಿದರೆ ಶತಮಾನದ ಅಂತ್ಯದ ವೇಳೆಗೆ ಅಲಾಸ್ಕಾ ಒಂದರಲ್ಲೇ ಸಿಡಿಲು-ಮಿಂಚಿನ ಸ್ಥಿತಿ ಮೂರುಪಟ್ಟು ಹೆಚ್ಚಲಿದೆ. ನಾವು ಈಗ ನೋಡುತ್ತಿರುವುದು ಅಪರೂಪದಲ್ಲಿ ಅಪರೂಪ. ಈ ವಾರ ಅಲಾಸ್ಕಾದಲ್ಲಿ ಕಂಡುಬಂದ ಸಿಡಿಲು ಅಬ್ಬರ, ಮಿಂಚು ಅನಿರೀಕ್ಷಿತ ಸ್ಥಳಗಳಲ್ಲಿ ಈಗಾಗಲೇ ಉಂಟಾಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
16.ಬೀಟಾ ಟೈಟಾನಿಯಂ ಮಿಶ್ರಲೋಹವನ್ನು ಅಭಿವೃದ್ಧಿಪಡಿಸಿದ ಡಿಆರ್ಡಿಒ
ಏರೋಸ್ಪೇಸ್ ಅಪ್ಲಿಕೇಶನ್ಗಳಿಗೆ ಸಂಕೀರ್ಣವಾದ ಘಟಕಗಳನ್ನು ತಯಾರಿಸಲು ಬಳಸುವಂತಹ ಅಧಿಕ ಸಾಮರ್ಥ್ಯದ ಬೀಟಾ ಟೈಟಾನಿಯಂ ಮಿಶ್ರಲೋಹವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ದೇಶೀಯವಾಗಿ ಅಭಿವೃದ್ಧಿಪಡಿಸಿದೆ.
ಉಕ್ಕುಗಳಿಗೆ ಹೋಲಿಸಿದರೆ ಬೀಟಾ ಟೈಟಾನಿಯಂ ಮಿಶ್ರಲೋಹ ಅತ್ಯುತ್ತಮ ತುಕ್ಕು ನಿರೋಧಕ ಗುಣ ಮತ್ತು ದೀರ್ಘ ಬಾಳಿಕೆಯ ಸಾಮರ್ಥ್ಯ ಹೊಂದಿದೆ. ಟೈಟಾನಿಯಂ ಜೊತೆಗೆ ವೆನಾಡಿಯಮ್, ಕಬ್ಬಿಣ ಮತ್ತು ಅಲ್ಯೂಮಿನಿಯಂ ಅನ್ನು ಒಳಗೊಂಡಿರುವ ಬೀಟಾ ಟೈಟಾನಿಯಂ ಮಿಶ್ರಲೋಹವನ್ನು ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರವಾದ ಸಾಂಪ್ರದಾಯಿಕ ಎನ್ಐ-ಸಿಆರ್-ಎಂಒ ರಚನೆಯ ಉಕ್ಕುಗಳಿಗೆ ಪರ್ಯಾಯವಾಗಿ ಬಳಸುತ್ತಿವೆ.
ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) 15ಕ್ಕೂ ಹೆಚ್ಚು ಉಕ್ಕಿನ ಘಟಕಗಳನ್ನು ಗುರುತಿಸಿದೆ. ಇವುಗಳನ್ನು ಮುಂದಿನ ದಿನಗಳಲ್ಲಿ ಬೀಟಾ ಟೈಟಾನಿಯಂ ಮಿಶ್ರಲೋಹ ತಯಾರಿಕೆಗೆ ಬದಲಾಯಿಸಬಹುದು ಎಂದು ಅದು ತಿಳಿಸಿದೆ.
17.ವಿಶ್ವದ ಮೊದಲ ಕೃತಕ ಹೃದಯ ಕಸಿ
ಫ್ರೆಂಚ್ ಪ್ರಾಸ್ತೆಟಿಕ್ಸ್ ಉತ್ಪಾದಕ ಕಾರ್ಮಾಟ್ ಉತ್ಪಾದಿಸಿದ ಕೃತಕ ಹೃದಯವೊಂದನ್ನು ಇಟಾಲಿಯನ್ ಮೂಲದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರಿಗೆ ಕಸಿ ಮಾಡಲಾಗಿದೆ.
ಈ ಕೃತಕ ಹೃದಯ ಕಸಿ ಕಾರ್ಯವನ್ನು ಇಟಲಿಯ ನೇಪಲ್ಸ್ ನ ಅಜೀಂಡಾ ಒಸ್ಪೆಡಲಿಯೆರಾ ಡಿ ಕೊಲ್ಲಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸಕ ಡಾ. ಸಿರೋ ಮೈಲ್ಲೊ ಅವರ ನೇತೃತ್ವದಲ್ಲಿ ಅಳವಡಿಸಲಾಗಿದೆ ಎಂದು ಕಾರ್ಮಾಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಆಡಳಿತ ಸೇವೆ ಪರೀಕ್ಷೆ, ಸಂದರ್ಶನಗಳಲ್ಲಿ ವಿಮರ್ಶಾತ್ಮಕ ಯೋಚನೆಗಾಗಿ
18.ಸಹಕಾರ ಸಂಘಗಳ ನಿರ್ವಹಣೆ: ಸಂವಿಧಾನದ 97ನೇ ತಿದ್ದುಪಡಿ ಭಾಗಶಃ ರದ್ದು
ಸಹಕಾರ ಸಂಘಗಳ ನಿರ್ವಹಣೆಗೆ ಸಂಬಂಧಿಸಿ ಸಂವಿಧಾನದ 97ನೇ ತಿದ್ದುಪಡಿಯ ಸಿಂಧುತ್ವವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಸಂಘಗಳ ರಚನೆ ಹಾಗೂ ಕಾರ್ಯಾಚರಣೆ ಕುರಿತ ತಿದ್ದುಪಡಿಯ ಭಾಗವನ್ನು ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಆರ್.ಎಫ್.ನರೀಮನ್, ಕೆ.ಎಂ.ಜೋಸೆಫ್ ಹಾಗೂ ಬಿ.ಆರ್.ಗವಾಯಿ ಅವರಿರುವ ನ್ಯಾಯಪೀಠ, ಈ ವಿಷಯ ಕುರಿತು 2:1ರ ಬಹುಮತದ ತೀರ್ಪು ಪ್ರಕಟಿಸಿತು.
'ಸಹಕಾರ ಸಂಘಗಳಿಗೆ ಸಂಬಂಧಿಸಿ ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಭಾಗವನ್ನು (IX ಬಿ) ರದ್ದುಪಡಿಸಿದ್ದೇವೆ. ಆದರೆ, ತಿದ್ದುಪಡಿಯನ್ನು ಎತ್ತಿ ಹಿಡಿದಿದ್ದೇವೆ' ಎಂದು ನ್ಯಾಯಪೀಠ ಹೇಳಿತು.
19.ದೇಶದ್ರೋಹ: 326 ಪ್ರಕರಣ ದಾಖಲು-6 ಮಂದಿ ಮಾತ್ರ ತಪ್ಪಿತಸ್ಥರು
ದೇಶದಲ್ಲಿ 2014 ಮತ್ತು 2019ರ ಅವಧಿಯಲ್ಲಿ ದೇಶದ್ರೋಹಕ್ಕೆ ಸಂಬಂಧಿಸಿದಂತೆ 326 ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಆರು ಮಂದಿ ಮಾತ್ರ ತಪ್ಪಿತಸ್ಥರೆಂದು ಸಾಬೀತಾಗಿದೆ.
ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಮಾಹಿತಿ ಒದಗಿಸಿದ್ದು, ಅಸ್ಸಾಂ ರಾಜ್ಯದಲ್ಲಿ ಅತಿ ಹೆಚ್ಚಿನ 54 ಪ್ರಕರಣಗಳು ದಾಖಲಾಗಿವೆ. ಆರು ವರ್ಷಗಳ ಈ ಅವಧಿಯಲ್ಲಿ 141 ಪ್ರಕರಣಗಳಲ್ಲಿ ಮಾತ್ರ ಆರೋಪಪಟ್ಟಿ ದಾಖಲಿಸಲಾಗಿದೆ.
20.ಪೆಗಾಸಸ್ ಗೂಢಚರ್ಯೆ ತತ್ರಾಂಶ ಹಗರಣದ ಬಗ್ಗೆ ಗೃಹ ಮಂತ್ರಿ ಪ್ರತಿಕ್ರಿಯೆ
ಪೆಗಾಸಸ್ ಗೂಢಚರ್ಯೆ ತತ್ರಾಂಶ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಅಮಿತ್ ಶಾ, ಇದು ತೊಂದರೆ ನೀಡುವವರು, ಅಡ್ಡಿಪಡಿಸುವವರಿಗಾಗಿ ನೀಡಿರುವ ವರದಿ ಎಂದು ಹೇಳಿದ್ದಾರೆ.
21.ಪೆಗಾಸಸ್: ಮಾಧ್ಯಮಗಳ ಮೇಲೆ ಬೇಹುಗಾರಿಕೆ ಬಗ್ಗೆ ಫ್ರೆಂಚ್ ತನಿಖೆ


ಮೊರಾಕ್ಕೋ ಗುಪ್ತಚರ ಸೇವೆಗಳು ಇಸ್ರೇಲಿ ಗೂಢಚರ್ಯೆ ತತ್ರಾಂಶ ಪೆಗಾಸಸ್ ಅನ್ನು ಹಲವಾರು ಫ್ರೆಂಚ್ ಪತ್ರಕರ್ತರ ಮೇಲೆ ಕಣ್ಣಿಡಲು ಬಳಸಿಕೊಂಡಿವೆ ಎಂಬ ಬಗ್ಗೆ ಫ್ರಾನ್ಸ್ ಅಭಿಯೋಜಕರು ತನಿಖೆ ಆರಂಭಿಸಿದ್ದಾರೆ.
ಸಾಲು ಸುದ್ದಿ
ಕೋವಿಡ್-19' ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕಾಗಿ ವಿಶ್ವ ಬ್ಯಾಂಕ್ ಕಳೆದ 15 ತಿಂಗಳಲ್ಲಿ ವಿವಿಧ ದೇಶಗಳಿಗೆ 157 ಬಿಲಿಯನ್ ಡಾಲರ್ ಹಣದ ನೆರವು ನೀಡಿದೆ ಎಂದು ವಿಶ್ವ ಬ್ಯಾಂಕ್ ಸಮೂಹಗಳ ಅಧ್ಯಕ್ಷ ಡೇವಿಡ್ ಮಲ್ಪಾಸಸ್ ಹೇಳಿದ್ದಾರೆ.
ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯದ ಮೇಲ್ಭಾಗದಿಂದ ಕಾವೇರಿ ಪ್ರತಿಮೆ ಬಳಿಗೆ ಇಳಿಯುವ ಮಾರ್ಗದ ಮೆಟ್ಟಿಲಿನ 30 ಕಲ್ಲುಗಳು ಕುಸಿದು ಬಿದ್ದಿದ್ದು, ಆತಂಕ ಸೃಷ್ಟಿಸಿದೆ.
ಕನ್ನಡ ಕಾಯಕ ವರ್ಷಾಚರಣೆ ಅಂಗವಾಗಿ ಇನ್ನು ಮುಂದೆ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ಎಲ್ಲಾ ಆದೇಶ, ಸುತ್ತೋಲೆ, ಮಾರ್ಗಸೂಚಿ ಹಾಗೂ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು’ ಎಂದು ಆರೋಗ್ಯ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕ ಚಂದ್ರ ಆದೇಶಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ತನ್ನ ಮಹತ್ವಾಕಾಂಕ್ಷಿ 'ಕೋವ್ಯಾಕ್ಸ್' ಲಸಿಕೆ ಅಭಿಯಾನದಡಿ ಭಾರತಕ್ಕೆ 7.5 ಮಿಲಿಯನ್ ಡೋಸ್ ಮಾಡೆರ್ನಾ ಲಸಿಕೆ ಅನುದಾನವಾಗಿ ನೀಡಲಿದೆ.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ರಾಜ್ಯಸಭೆಯಲ್ಲಿ ಸದನದ ಹೊಸ ಉಪನಾಯಕರಾಗಲಿದ್ದಾರೆ.
ದೇಶದಲ್ಲಿ ಕೋವಿಡ್–19 ಸಾಂಕ್ರಾಮಿಕದ ಎರಡನೇ ಅಲೆ ಉಲ್ಬಣಕ್ಕೆ ಡೆಲ್ಟಾ ರೂಪಾಂತರ ತಳಿಯೇ ಕಾರಣವಾಗಿದ್ದು, ಇದರಿಂದ ಶೇಕಡ 80ರಷ್ಟು ಹೊಸ ಪ್ರಕರಣಗಳು ಸೃಷ್ಟಿಯಾದವು ಎಂದು ಇಂಡಿಯನ್ ಸಾರ್ಸ್–ಕೋವ್2 ಜಿನೋಮಿಕ್ಸ್ ಕನ್ಸೊರ್ಟಿಯಂ ಸಹ ಅಧ್ಯಕ್ಷ ಡಾ. ಎನ್. ಕೆ. ಅರೋರಾ ಪ್ರತಿಪಾದಿಸಿದ್ದಾರೆ.
ಸಿಂಗಪುರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಕಂಡಿದೆ. ಸಮುದಾಯದಲ್ಲಿ ಸೋಂಕು ಏಕಾಏಕಿ 200ರ ಗಡಿ ತಲುಪಿದೆ. ಸರ್ಕಾರ ಮತ್ತೆ ಕೊರೊನಾ ನಿಯಮಗಳನ್ನು ಬಿಗಿಯಾಗಿ ಜಾರಿಗೆ ತರಲು ನಿರ್ಧರಿಸಿದೆ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್
22.ಕೇಂದ್ರದಿಂದ ರಾಜ್ಯಗಳಿಗೆ ಬಾಕಿ ಜಿಎಸ್ಟಿ ಪರಿಹಾರ ಮೊತ್ತ: 81000 ಕೋಟಿ ರೂ


ಕೇಂದ್ರವು ರಾಜ್ಯಗಳಿಗೆ ಬಾಕಿ ಉಳಿಸಿಕೊಂಡಿರುವ ಜಿಎಸ್ಟಿ ಪರಿಹಾರ ಮೊತ್ತ 81000 ಕೋಟಿ ರೂ. ಕರ್ನಾಟಕಕ್ಕೆ ಎರಡನೆಯ ಅತಿ ಹೆಚ್ಚು ಬಾಕಿ ಬರಬೇಕಿದೆ
23.ಚಂದ್ರನ ದಿನ
ನೀಲ್ ಆರ್ಮ್ಸ್ಟ್ರಾಂಗ್, ಮೈಕೆಲ್ ಕಾಲಿನ್ಸ್ ಮತ್ತು ಎಡ್ವಿನ್ ಬಝ್ ಆಲ್ಡ್ರಿನ್.
52 ವರ್ಷಗಳ ಹಿಂದೆ ಇಂದಿನ ದಿನ 20 ಜುಲೈ 1969 ರಂದು ಗಗನಯಾತ್ರಿಗಳಾದ ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಬಝ್ ಆಲ್ಡ್ರಿನ್ ಚಂದ್ರನ ಮೇಲೆ ಇಳಿದ ಮೊದಲ ಮಾನವರಾಗಿದ್ದಾರೆ. ಇದರ ಸ್ಮರಣಾರ್ಥ Moon Day ಆಚರಿಸಲಾಗುತ್ತದೆ. ಮೈಕೆಲ್ ಕಾಲಿನ್ಸ್ ಚಂದ್ರನ ಕಕ್ಷೆಯಲ್ಲಿ ಮಾತೃನೌಕೆಯಲ್ಲಿದ್ದು ನೀಲ್ ಮತ್ತು ಎಡ್ವಿನ್ ಸುರಕ್ಷಿತ ವಾಪಸಾಗುವ ಹೊಣೆ ಹೊತ್ತಿ
ದ್ದರು.